ಪಟೌಡಿ, ನವಾಬ್ -
	ಈ ಹೆಸರಿನ ಇಬ್ಬರು ಖ್ಯಾತ ಕ್ರಿಕೆಟ್ ಆಟಗಾರರು ಇದ್ದಾರೆ. ದೆಹಲಿ ಸಮೀಪದ ಪಟೌಡಿ ಎಂಬ ಪುಟ್ಟ ಸಂಸ್ಥಾನದ ನವಾಬ ಕುಮಾರ ಇಫ್ತಿಖರ್ ಹುಸೇನ್ ಇಂಗ್ಲೆಂಡಿನಲ್ಲಿ ಓದುತ್ತಿದ್ದಾಗ ಕ್ರಿಕೆಟ್‍ನಲ್ಲಿ ಪರಿಣತಿಗಳಿಸಿದ್ದರಿಂದ ಕ್ರಿಕೆಟ್ ರಂಗದಲ್ಲಿ ಪಟೌಡಿಯ ನವಾಬ ಎಂದು ಹೆಸರಾದರು. ಅಭಿಮಾನಿಗಳಿಗೆ ಪ್ರೀತಿಯ ಪ್ಯಾಟ್ ಆದರು. ಇವರ ಮಗ ಮನ್ಸೂರ್ ಅಲಿಖಾನ್ ಇನ್ನೊಬ್ಬ ಪಟೌಡಿ. ಇವರು ಕ್ರಿಕೆಟ್ ಅಭಿಮಾನಿಗಳಲ್ಲಿ ಟೈಗರ್ ಎನಿಸಿದರು. ಇವರಿಬ್ಬರನ್ನೂ ಕ್ರಿಕೆಟ್ ಪ್ರಿಯರು ನ್ಯೂಬ್ ಎಂದು ಕರೆಯುವುದಿದೆ. ಇಂಗ್ಲೆಂಡಿನಲ್ಲಿದ್ದಾಗಲೆ ಹಿರಿಯ ಕಿರಿಯ ಪಟೌಡಿಗಳಿಬ್ಬರೂ ಕ್ರಿಕೆಟ್ ಜೀವನದಲ್ಲಿ ಪ್ರಸಿದ್ಧಿಗಳಿಸಿದರಲ್ಲದೆ, ಮುಂದೆ ಭಾರತದಲ್ಲೂ ಅದೇ ಕೀರ್ತಿಯನ್ನು ಉಳಿಸಿಕೊಂಡರು.

	ಇಫ್ತಿಖರ್ ಹುಸೇನ್ : 1910ರ ಮಾರ್ಚಿ 16ರಂದು ಜನಿಸಿದ ಇವರು ಮುಂದೆ ಲಾಹೋರನಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗಿ ಕ್ರಿಕೆಟ್‍ನಲ್ಲಿ ಆಸಕ್ತಿ ಬೆಳೆಸಿಕೊಂಡರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಕ್ಸ್‍ಫರ್ಡ್‍ಗೆ ಹೋದಾಗ ವಿಶ್ವವಿದ್ಯಾಲಯದ ಕ್ರಿಕೆಟ್ ತಂಡದಲ್ಲಿ ಸೇರಿ ಆಡತೊಡಗಿದರು. 1929ರಲ್ಲಿ ಮೊದಲ ಬಾರಿಗೆ ಕೇಂಬ್ರಿಜ್ ವಿರುದ್ಧ ಪಂದ್ಯದಲ್ಲಿ ಭಾಗವಹಿಸಿದರು. 1931 ರಲ್ಲಿ ಆಕ್ಸ್‍ಫರ್ಡ್, ಕೇಂಬ್ರಿಜ್ ವಿಶ್ವವಿದ್ಯಾಲಯಗಳ ನಡುವೆ ಒಂದು ಕ್ರಿಕೆಟ್ ಪಂದ್ಯ ನಡೆಯಿತು. ಪ್ರಥಮ ಇನ್ನಿಂಗ್ಸ್‍ನ್ನಲ್ಲಿ ಕೇಂಬ್ರಿಜ್‍ನ ಆಟಗಾರ ರ್ಯಾಟಕ್ಲಿಫ್ 201 ರನ್ ಗಳಿಸಿದಾಗ ಅದು ಇಂಗ್ಲಿಷ್ ಅಂತರ ವಿಶ್ವವಿದ್ಯಾಲಯದ ಕ್ರಿಕೆಟ್ ಪಂದ್ಯಗಳ ಇತಿಹಾಸದಲ್ಲಿ ಅಪೂರ್ವ ದಾಖಲೆಎನಿಸಿತು. ಆಗ ಆಕ್ಸ್‍ಫರ್ಡನ ಆಟಗಾರರಲ್ಲಿ ಒಬ್ಬರಾದ ಪಟೌಡಿ ಅವರು ನಾನು ಅದಕ್ಕಿಂತ ಹೆಚ್ಚು ರನ್ ಗಳಿಸುತ್ತೇನೆ ಎಂದಾಗ ಅವರ ಮಿತ್ರರೆಲ್ಲ ನಕ್ಕರು. ಆದರೆ ಅದೇ ಪಂದ್ಯದಲ್ಲಿ ಮರುದಿನ ಆಡಿದ ಪಟೌಡಿ ಅವರು 238 ರನ್ ಗಳಿಸಿ ರ್ಯಾಟ್‍ಕ್ಲಿಫ್‍ನ ದಾಖಲೆಯನ್ನು ಒಂದೇ ದಿನದಲ್ಲಿ ಮುರಿದರು. ಈ ದಾಖಲೆ ಇಂಗ್ಲಿಷ್ ಅಂತರ ವಿಶ್ವವಿದ್ಯಾನಿಲಯ ಕ್ರಿಕೆಟ್ ಪಂದ್ಯಗಳಲ್ಲಿ ಮೀರಿಸಲಾಗದ ದಾಖಲೆಯಾಗಿ ಉಳಿದಿದೆ. 1932ರಲ್ಲಿ ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್ ತಂಡದಲ್ಲಿ ಆಡಲು ಇವರು ಆಯ್ಕೆಯಾದರು. ಸಿಡ್ನಿಯಲ್ಲಿ ನಡೆದ ಪ್ರಪಥಮ ಟೆಸ್ಟ್‍ನಲ್ಲಿಯೇ ಇವರು ಶತಕ ಭಾರಿಸಿ ಔಟಾಗದೆ ಉಳಿದರು. ಮರುವರ್ಷ ಆಸ್ಟ್ರೇಲಿಯ ಪ್ರವಾಸ ಕೈಗೊಂಡ ಇಂಗ್ಲೆಂಡ್ ಟೀಮಿನಲ್ಲೂ 1939 ರಲ್ಲಿ ಆಸ್ಟ್ರೇಲಿಯ ಇಂಗ್ಲೆಂಡಿಗೆ ಬಂದಾಗಲೂ ಇವರು ಇಂಗ್ಲೆಂಡ್ ತಂಡದ ಪರವಾಗಿ ಆಡಿದರು.

	ಇವರು ಪೋಲೋ, ಹಾಕಿ, ಕುದುರೆ ಸವಾರಿಗಳಲ್ಲೂ ಪರಿಣಿತರಾಗಿದ್ದರು. 1928ರ ಒಲಂಪಿಕ್ಸ್‍ನಲ್ಲಿ ಪ್ರಥಮ ಸಲ ಭಾಗವಹಿಸಿ ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡದಲ್ಲಿದ್ದರು. ಆಗ ಭಾರತದ ವಿರುದ್ಧ ಆಡಿದ ಐದು ದೇಶಗಳು ಒಂದು ಗೋಲನ್ನೂ ಮಾಡಲಾಗದ್ದು ಒಂದು ದಾಖಲೆಯಾಗಿದೆ.

	1936ರಲ್ಲಿ ಇಂಗ್ಲೆಂಡಿನ ಪ್ರವಾಸ ಕೈಗೊಂಡ ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಬೇಕೆಂಬ ಮನವಿಯನ್ನು ತಮ್ಮ ಅನಾರೋಗ್ಯದಿಂದ ನಿರಾಕರಿಸಿದರಾದರೂ 1946ರಲ್ಲಿ ಇಂಗ್ಲೆಂಡ್ ಪ್ರವಾಸದ ನಾಯಕತ್ವವನ್ನು ವಹಿಸಿದರು.

	ಇವರು ದಕ್ಷ ಆಡಳಿತಗಾರರಾಗಿದ್ದರು. ಪ್ರಧಾನಿ ನೆಹರೂ ಅವರು ಸ್ವತಂತ್ರ ಭಾರತ ಸರ್ಕಾರದ ವಿದೇಶಿ ಖಾತೆಯಲ್ಲಿ ಇವರನ್ನು ಅಧಿಕಾರಿಯಾಗಿ ನೇಮಿಸಿದ್ದರು.

	1952ರ ಜನವರಿ 5 ರಂದು ಮಗ ಮನ್ಸೂರ್ ಅಲಿಖಾನನ ಹುಟ್ಟುಹಬ್ಬದ ಸಂತೋಷಕ್ಕಾಗಿ ಪೋಲೋ ಆಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಮೃತರಾದರು.

	ಮನ್ಸೂರ್ ಅಲಿಖಾನ್ : ಭೂಪಾಲ್‍ನಲ್ಲಿ 1941 ರ ಜನವರಿ 5 ರಂದು ಹುಟ್ಟಿದ ಇವರ ವಿದ್ಯಾಭ್ಯಾಸ ಇಂಗ್ಲೆಂಡಿನಲ್ಲಿ ಆಯಿತು. ಮಿಂಚೆಸ್ಟರ್ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಪಡೆಯುತ್ತಿದ್ದಾಗ ಇವರು ಕ್ರಿಕೆಟ್ ಮತ್ತು ಪುಟ್‍ಬಾಲ್ ಮೊದಲಾದ ಆಟಗಳಲ್ಲಿ ಭಾಗವಹಿಸಿದರು. ಇವರು ಮಿಂಚೆಸ್ಟರ್ ಕಾಲೇಜಿನ ಪುಟ್‍ಬಾಲ್ ತಂಡದ ಲೆಫ್ಟ್ ಹಾಫ್ ಆಟಗಾರರಾಗಿದ್ದರು. 1958ರಲ್ಲಿ ಸಸೆಕ್ಸ್ ಕ್ರಿಕೆಟ್ ತಂಡದ ಪರವಾಗಿ ಆಡಲು ಪ್ರಾರಂಭಿಸಿದಿವರು ತಮ್ಮ 17ನೆಯ ವರ್ಷದಲ್ಲೇ ಕ್ರಿಕೆಟ್ ಆಟಗಾರರಾಗಿ ಹೆಸರುಗಳಿಸಿದರು. 1960ರಲ್ಲಿ ಆಕ್ಸ್‍ಫಡ್ರ್À ವಿಶ್ವವಿದ್ಯಾಲಯವನ್ನು ಸೇರಿದ ಇವರು ತಾವು ಭಾಗವಹಿಸಿದ ಪ್ರಥಮ ಅಂತರ ವಿಶ್ವವಿದ್ಯಾಲಯ ಪಂದ್ಯದಲ್ಲಿ ಶತಕ ಬಾರಿಸಿದರು. 1961ರ ಮೇ, ಜೂನ್ ತಿಂಗಳ ಕ್ರಿಕೆಟ್ ಪಂದ್ಯಗಳಲ್ಲಿ ನಾಲ್ಕು ಶತಕಗಳನ್ನು ಪಡೆದರು.

	ಅದೇ ವರ್ಷ ಇಂಗ್ಲೆಂಡಿನಲ್ಲಿ ಒಂದು ಕಾರು ಅಪಘಾತಕ್ಕೆ ತುತ್ತಾಗಿ ಅವರ ಬಲಗಣ್ಣಿಗೆ ಗಾಜಿನ ಚೂರು ಸೇರಿತು. ಶಸ್ತ್ರಚಿಕಿತ್ಸೆಯ ಅನಂತರ ಗುಣವಾದರು. ಈ ಅಪಘಾತದಿಂದ ಚೇತರಿಸಿಕೊಂಡ ಅನಂತರ ಪಟೌಡಿಯವರು ತಿರುಗಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. 1961ರಲ್ಲಿ ಇಂಗ್ಲೆಂಡಿನ ತಂಡ ಭಾರತ ಪ್ರವಾಸದಲ್ಲಿದ್ದಾಗ ಇವರುಪ್ರಥಮ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದರು. ದೆಹಲಿಯಲ್ಲಿ ನಡೆದ ಐದನೆಯ ಟೆಸ್ಟ್ ಪಂದ್ಯದಲ್ಲಿ ಭಾರತದ ಪರವಾಗಿ (ಇಂಗ್ಲೆಂಡ್ ವಿರುದ್ಧ) ಶತಕ ಬಾರಿಸಿ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಿಕೊಂಡರು.

	ನಾರಿಕಂಟ್ರಾಕ್ಟರ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡ ಭಾರತ ತಂಡದಲ್ಲಿ ಪಟೌಡಿ ಉಪನಾಯಕರಾಗಿದ್ದರು. ಅಲ್ಲಿ ತಲೆಗೆ ಪೆಟ್ಟು ತಗಲಿದ ನಾಯಕ ನಾರಿ ಕಂಟ್ರಾಕ್ಟರರಿಗೆ ಆಡಲಾಗಲಿಲ್ಲ. ಆಗ ಪಟೌಡಿಯವರ ಪ್ರಾಯ ಕೇವಲ 21. ಅನಂತರ 1970 ರವರೆಗೆ ಸತತ 36 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವನ್ನು ನಿರ್ವಹಿಸಿದ ಇವರು ಜಗತ್ತಿನಲ್ಲಿಯೇ ಅತ್ಯಂತ ಕಿರಿಯ ಟೆಸ್ಟ್ ನಾಯಕ ಎಂಬ ದಾಖಲೆ ಸ್ಥಾಪಿಸಿದರು.

	1965ರಲ್ಲಿ ದೆಹಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್ ಪಂದ್ಯದಲ್ಲಿ ಔಟಾಗದೇ 203 ರನ್ನುಗಳನ್ನು ಪಡೆದದ್ದು ಇವರ ಅತ್ಯುಚ್ಛ ದಾಖಲೆ.

	ಬ್ಯಾಟು ಮಾಡುವಾಗ ಇವರದು ಆಕ್ರಮಣಕಾರಿ ಪ್ರವೃತ್ತಿ. ಇವರ ಸುಂದರವಾದ ಹೊಡೆತಗಳನ್ನು ನೋಡುವುದು ಆಕರ್ಷಣೀಯ. ಸ್ಕ್ವೇರ್ ಕಟ್ ಇವರ ಮೆಚ್ಚಿನ ಹೊಡೆತ. ಆಟದಲ್ಲಿ ಚೆಂಡನ್ನು ನಾಲ್ಕು ಕಡೆ ಅಟ್ಟುವಲ್ಲಿ ಪ್ರವೀಣರು. ಉತ್ತಮ ಬ್ಯಾಟುಗಾರ, ಸಮರ್ಥ ನಾಯಕ, ಅಲ್ಲದೇ ಉತ್ತಮ ಫೀಲ್ಡರ್ ಕೂಡ. ಕವರ್ ಪಾಯಿಂಟ್‍ನಲ್ಲಿ ಪ್ರಪಂಚದಲ್ಲಿಯೇ ಅತ್ಯುತ್ತಮ ಫೀಲ್ಡರ್ ಎಂದು ಹೆಸರಾಗಿದ್ದಾರೆ. 25 ಕ್ಯಾಚುಗಳನ್ನು ಹಿಡಿದಿದ್ದಾರೆ.

	ಇವರಿಗೆ ಭಾರತ ಸರ್ಕಾರ 1967ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. 1971ರಲ್ಲಿ ಲೋಕಸಭೆಯ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಉತ್ತಮ ಬೇಟೆಗಾರರು ಎನಿಸಿದ ಇವರು ಕ್ರೀಡಾವರದಿಗಾರರಾಗಿಯೂ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಖ್ಯಾತ ಚಲನಚಿತ್ರ ತಾರೆ ಶರ್ಮಿಳಾ ಟಾಗೋರ್ ಇವರ ಪತ್ನಿ. 1972-73ರ ವರೆಗೆ 42 ಟೆಸ್ಟ್ ಪಂದ್ಯಗಳಲ್ಲಿ (77 ಇನ್ನಿಂಗ್ಸ್) ಆಡಿದ ಪಟೌಡಿ ಅವರು 2,699 ರನ್ನುಗಳನ್ನು (ಸರಾಸರಿ 39.97) ಗಳಿಸಿದ್ದಾರೆ.

	ಇವರ ನಾಯಕತ್ವದಲ್ಲಿ ನಡೆದ 36 ಟೆಸ್ಟ್ ಪಂದ್ಯಗಳಲ್ಲಿ 7 ರಲ್ಲಿ ವಿಜಯ 17 ಪಂದ್ಯಗಳಲ್ಲಿ ಸೋಲು, 12 ಪಂದ್ಯಗಳಲ್ಲಿ ಡ್ರಾ ಲಭಿಸಿದೆ. 											(ಎಸ್.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ